ಕುಕುಂಧ

  ಗರ್ಭದಲ್ಲಿರುವ ಎಳೆಗೂಸಿಗೂ ಗರ್ಭಧರಿಸಿದ ಸ್ತ್ರೀಗೂ ತೊಂದರೆ ಕೊಡುವ ಒಂದು ಬಗೆಯ ಪಿಶಾಚಗಳಿವು. ಕೃಕನ್ಧ ಎಂದೂ ಕರೆವುದಿದೆ. ಸಾಮಾನ್ಯವಾಗಿ ಯಾವುದೇ ಬಗೆ ಊನಗಳಿಲ್ಲದೇ ಒಂಬತ್ತು ತಿಂಗಳ ಕಾಲ ಬೆಳೆದು ಹತ್ತನೆಯ ತಿಂಗಳಲ್ಲಿ ಜನನವಾಗಿ ತಾಯಿ, ಮಗು ಇಬ್ಬರೂ ಆಯುಷ್ಮಂತರೂ ಆರೋಗ್ಯ ದೃಢಗಾತ್ರರೂ ಆಧಿರಹಿತರೂ ಆಗಿ ಬಾಳಬೇಕು. ಇಂಥ ಬಾಳನ್ನು ನಾಶಮಾಡಲು ಈ ದುಷ್ಟಶಕ್ತಿಗಳು ಸದಾ ಕಾಯುತ್ತಿರುತ್ತವೆ. ಇವು ಗರ್ಭವತಿಯರಾದ ಸ್ತ್ರೀಯರ ಸುತ್ತಮುತ್ತಲೂ ಜಾಗ್ರತ್, ಸ್ವಪ್ನ, ಸುಷುಪ್ತಿ ಕಾಲಗಳಲ್ಲಿಯೂ ಮನೆಯ ಒಳಗೆ ಹೊರಗೆ ಊರಿನಲ್ಲಿ ಮತ್ತು ಕಾಡಿನಲ್ಲಿ ಪಿಶಾಚ ರಾಕ್ಷಸಾದಿ ರೂಪದಲ್ಲಿ, ನೆಂಟರಿಷ್ಟರ ರೂಪದಲ್ಲಿ, ಪಶುಪಕ್ಷಿಗಳ ರೂಪಗಳಲ್ಲಿ ಸುತ್ತಾಡುತ್ತ ಬಗೆಬಗೆಯಾದ ಧ್ವನಿ, ಬಗೆಬಗೆಯ ಆಕಾರ, ಬಗೆಬಗೆಯ ನರ್ತನಗಳೊಡನೆ ಗರ್ಭವನ್ನೂ ಗರ್ಭವತಿಯರನ್ನೂ ತಮ್ಮೀ ದುಷ್ಟಕೃತ್ಯಗಳಿಂದ ಹಿಂಸೆ ಮಾಡುತ್ತವೆ. ಅದರಿಂದ ಗರ್ಭಸ್ಥ ಶಿಶುವಿನಲ್ಲಿ ಅಂಗವೈಕಲ್ಯ, ಇಂದ್ರಿಯನಾಶ, ಆಯುರ್ನಾಶ ಕಾಣಬರುತ್ತವಲ್ಲದೆ ಗರ್ಭಪಾತ, ಪ್ರಸವವಾದ ಮೇಲೆ ಮೃತ್ಯು, ಸೂತಿಕಾಗೃಹದಲ್ಲಿರುವಾಗ ಮೃತ್ಯು ಬುದ್ಧಿವೈಕಲ್ಯಗಳುಂಟಾಗುತ್ತವೆ. ಅಂತೆಯೇ ತಾಯಿಯಲ್ಲೂ ವಿವಿಧವಾದ ಉಪದ್ರವಗಳು ತಲೆದೋರುತ್ತವೆ. ಇಂಥ ಶಕ್ತಿಗಳು ಅನೇಕ. ಅಥರ್ವವೇದದ 8ನೆಯ ಕಾಂಡದಲ್ಲಿ ಅವುಗಳ ಪ್ರಸ್ತಾಪವಿದೆ. ಅವುಗಳ ಪೈಕಿ ಕುಕುಂಧಗಳ ವಿಚಾರ 11ನೆಯ ಮಂತ್ರದಲ್ಲಿದೆ.

ಯೇ ಕುಕುಂಧಾಃ ಕುಕೂರವಾಃ (ಭಾಃ) ಕೃತ್ತೀರ್ದೂರ್ಶಾನಿಬಿಭ್ರತಿ

ಕ್ಲೀಬಾ ಇವ ಪ್ರನೃತ್ಯನ್ತೋ ವನೇ ಯೇ ಕುರ್ವತೇ ಫೋಷಂ ತಾನಿತೋ 

ನಾಶಯಾಮಸಿ.||

 ಯಾವ ಪಿಶಾಚಗಳು ಕುಕೂ ಕುಕೂ ಎಂದು ಕೋಳಿಯಂತೆ ವಿಕಾರವಾದ ಧ್ವನಿ ಮಾಡುತ್ತ ಕೆಟ್ಟುವಾದ ಹಿಂಸಾಕಾರ್ಯವನ್ನು ಮಾಡುತ್ತ ನಪುಂಸಕರಂತೆ ತಲೆ ಮತ್ತೆ ಕಾಲುಗಳನ್ನು ಅಲ್ಲಾಡಿಸುತ್ತ, ಕಾಡಿನಲ್ಲಿ ಭಯಂಕರ ಧ್ವನಿಮಾಡುತ್ತ, ಗರ್ಭಿಣಿಯರಿಗೆ ತೊಂದರೆ ಕೊಡುತ್ತವೆಯೋ, ಅಂಥ ದುಷ್ಟಪಿಶಾಚಗಳನ್ನು ಬಿಳುಪು ಮತ್ತು ಹಳದಿ ಸಾಸುವೆಗಳಿಂದ, ಮೇಲಿನ ಮಂತ್ರವನ್ನುಚ್ಚರಿಸಿ ಅಗ್ನಿಯಲ್ಲಿ ಹೋಮಮಾಡಿ ನಾಶಗೊಳಿಸಬೇಕೆಂದು ಈ ಪ್ರಾಥನೆಯ ಅರ್ಥ. ಇದರಿಂದ ಗರ್ಭರಕ್ಷಣೆಯಾಗುವುದು ಎಂದಿದೆ.

 

(ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ